ರಿಕಾರ್ಡೊ, ಡೇವಿಡ್
1772-1823. 19ನೆಯ ಶತಮಾನದ ಪ್ರಾರಂಭದಲ್ಲಿ ವಿಕಾಸಗೊಳ್ಳುತ್ತಿದ್ದ ಅರ್ಥಶಾಸ್ತ್ರಕ್ಕೆ ಒಂದು ನಿಯಮಬದ್ಧ ತಳಪಾಯ ರೂಪಿಸಿ ಅದರ ಬೆಳೆವಣಿಗೆಗೆ ಕಾರಣನಾದ ಪ್ರಸಿದ್ಧ ಅರ್ಥಶಾಸ್ತ್ರಜ್ಞ. 1772 ಏಪ್ರಿಲ್‍ನಲ್ಲಿ ಲಂಡನ್ ನಗರದಲ್ಲಿ ಈತ ಜನಿಸಿದ. ಈತನ ತಂದೆ ಒಬ್ಬ ಡಚ್ ಜ್ಯೂ. ವ್ಯಾಪಾರದಲ್ಲಿ ಪ್ರಸಿದ್ಧವಾಗಿದ್ದ ಕುಟುಂಬ. ಈತ 1786ರಲ್ಲಿ ತಂದೆಯ ಕಚೇರಿಯಲ್ಲಿ ಕೆಲಸ ಪ್ರಾರಂಭಿಸಿದ. ತಂದೆಯಂತೆಯೇ ಈತನಿಗೂ ವ್ಯಾಪಾರದಲ್ಲಿ ಬಹಳವಾದ ಆಸಕ್ತಿ ಹಾಗೂ ಹಣಕಾಸಿನ ವ್ಯವಹಾರದಲ್ಲಿ ತುಂಬ ಶ್ರದ್ಧೆ. ಈತ 1793ರಲ್ಲಿ ವಿಲ್ಕಿನ್‍ಸನ್ ಎಂಬ ಕ್ರಿಶ್ಚಿಯನಳನ್ನು ಮದುವೆಯಾದ ಕಾರಣ ಮನೆ ಹಾಗೂ ತಂದೆಯ ಕಚೇರಿ ಎರಡನ್ನೂ ತ್ಯಜಿಸಬೇಕಾಯಿತು. ಈತ ಸ್ವಂತ ವ್ಯಾಪಾರ ವಹಿವಾಟು ನಡೆಸಿ ಸಾಕಷ್ಟು ಗಳಿಸಿದ. ಆಡಮ್‍ಸ್ಮಿತ್‍ನ ಬರೆಹಗಳಿಂದ ಪ್ರಭಾವಿತನಾಗಿ ಅರ್ಥಶಾಸ್ತ್ರದ ಅಧ್ಯಯನಕ್ಕೆ ತೊಡಗಿದ.

ವ್ಯಾಪಾರಾನುಭವ ಹಾಗೂ ಪರಿಶೀಲನಾ ತೀಕ್ಷ್ಣಬುದ್ಧಿಯ ಈತ 1809ರಲ್ಲಿ ಬಂಗಾರದ ವಿಶೇಷ ಬೆಲೆ ಕುರಿತಾಗಿ ಒಂದು ಪ್ರಬಂಧ ಬರೆದ. ಆ ಪ್ರಬಂಧ ವಾದ ವಿವಾದಕ್ಕೆ ಪ್ರಚೋದನೆಯಾಗಿ ಅದರ ಪರಿಶೀಲನೆಗೆ ಪರಿಷತ್ತು ಒಂದು ಸಮಿತಿ ನೇಮಕ ಮಾಡಿತು. ಸಮಿತಿಯ ವರದಿ ಈತನ ಅಭಿಪ್ರಾಯಗಳ ಸತ್ಯತೆಯನ್ನು ಸಮರ್ಥಿಸಿತು. ಇದರಿಂದಾಗಿ ಕಾರ್ಯರೂಪದಲ್ಲಿದ್ದ ಬ್ಯಾಂಕಿಂಗ್ ಶಾಸನವೊಂದು ರದ್ದಾಗಿ ಈತನ ಸಿದ್ಧಾಂತಗಳು ಸಾರ್ವಜನಿಕ ಗಮನ ಸೆಳೆದುವು. ಅದೇ ಸಮಯದಲ್ಲಿ ವಿದೇಶಗಳಿಂದ ಅನಿಯಂತ್ರಿತವಾಗಿ ಆಹಾರ ಧಾನ್ಯಗಳನ್ನು ಆಮದು ಮಾಡುವುದು ಆರ್ಥಿಕ ದೃಷ್ಟಿಯಲ್ಲಿ ಸರಿಯೋ ತಪ್ಪೋ ಎಂಬುದು ದೊಡ್ಡ ಚರ್ಚೆಯಾಗಿತ್ತು. ಆಗ ಕಾರ್ಯ ರೂಪದಲ್ಲಿದ್ದ ಆಹಾರಧಾನ್ಯ ಶಾಸನಗಳು ಕಟುವಾದ ವಿಮರ್ಶೆಗೊಳಗಾಗಿದ್ದುವು. ಈತ ಈ ಸಮಸ್ಯೆ ಕುರಿತಾಗಿ 1815ರಲ್ಲಿ ಎಸ್ಸೆ ಆನ್ ದಿ ಇನ್‍ಪ್ಲುಯನ್ಸ್ ಆಫ್ ಎ ಲೊ ಪ್ರೈಸ್ ಆಫ್ ಕಾರ್ನ್ ಆನ್ ದಿ ಪ್ರಾಫಿಟ್ಸ್ ಆಫ್ ಸ್ಟಾಕ್ ಎಂಬ ಪ್ರಬಂಧ ಪ್ರಕಟಿಸಿದ. ಈ ಪ್ರಬಂಧ ರಿಕಾರ್ಡೊ ಪಂಥದವರ ಮೂಲ ಸಿದ್ಧಾಂತಗಳನ್ನೊಳಗೊಂಡಿದೆ. ಕೂಲಿಯ ಹೆಚ್ಚಳ ಬೆಲೆಯನ್ನೇರಿ ಸುವುದಿಲ್ಲ, ಸಮಾಜದ ಪ್ರಗತಿ ಆಹಾರ ಉತ್ಪಾದನೆಯ ವೆಚ್ಚದಿಂದ ನಿರ್ಧರಿಸಲ್ಪಡುತ್ತದೆ. ಆಮದು ಆಹಾರ ಧಾನ್ಯಗಳ ಮೇಲಿನ ಸುಂಕ ಹೆಚ್ಚಳದಿಂದ ದೇಶೀಯರ ಬಾಡಿಗೆ ದರದ ಹೆಚ್ಚಳವಾಗುವುದರೊಂದಿಗೆ ಉತ್ಪಾದಕರ ಲಾಭ ಕಡಮೆಯಾಗುತ್ತದೆ ಎಂಬುದು ಇಲ್ಲಿಯ ಮುಖ್ಯಾಂಶ ವಾಗಿತ್ತು. ರಿಕಾರ್ಡೊ ಬ್ಯಾಂಕಿಂಗ್ ಮತ್ತು ನಾಣ್ಯ ಚಲಾವಣಾ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಲೇಖನಗಳನ್ನು ಪ್ರಕಟಿಸಿದ. ಕಾಗದ ಹಣ ಮೌಲ್ಯವನ್ನು ಪರೀಕ್ಷಿಸುವ ವಿಧಾನಗಳನ್ನು ಕುರಿತಂತೆ ದಿ ಹೈಪ್ರೈಸ್ ಆಫ್ ಬುಲಿಯನ್ ಎ ಪ್ರೂಫ್ ಆಫ್ ದಿ ಡಿಪ್ರಿಸಿಯೇಷನ್ ಆಫ್ ಬ್ಯಾಂಕ್ ನೋಟ್ಸ್ 1810ರಲ್ಲೂ ಹಣ ಕುರಿತಾದ ಸಿದ್ಧಾಂತಗಳ ಪ್ರೊಪೋಸಲ್ಸ್ ಫಾರ್ ಎನ್ ಇಕನಾಮಿಕಲ್ ಅಂಡ್ ಸೆಕ್ಯೂರ್ ಕರೆನ್ಸಿ 1816ರಲ್ಲೂ ಪ್ರಚಲಿತ ಬ್ಯಾಂಕ್ ವ್ಯವಹಾರಗಳನ್ನು ಕುರಿತಂತೆ ಎ ಪ್ಲೀ ಫಾರ್ ಎ ನ್ಯಾಶನಲ್ ಬ್ಯಾಂಕ್, 1824ರಲ್ಲೂ ಪ್ರಕಟಗೊಂಡವು.

ಈತ ಅರ್ಥಶಾಸ್ತ್ರದ ಮುಖ್ಯ ಗ್ರಂಥಗಳಲ್ಲೊಂ ದಾದ  ಪ್ರಿನ್ಸಿ ಪಲ್ಸ್ ಆಫ್ ಪೊಲಿಟಿಕಲ್ ಎಕಾನಮಿ ಅಂಡ್ ಟ್ಯಾಕ್ಸೇಶನ್ ಅನ್ನು 1817ರಲ್ಲಿ ಪ್ರಕಟಿಸಿದ. ಸ್ವತಂತ್ರ ಸ್ಪರ್ಧೆಯ ಪೂರ್ವ ಸಿದ್ಧಾಂತ ಪ್ರಕಾರ ಉತ್ಪಾದನೆ ಯಲ್ಲಿ ವೆಚ್ಚವಾದ ಶ್ರಮದ ಮೇಲೆ ವಿನಿಮಯ  ಮೌಲ್ಯ ನಿರ್ಧರಿಸಲಾಗುತ್ತದೆ ಎಂಬುದು ಈ ಗ್ರಂಥದ ಸಿದ್ಧಾಂತ. ಈತನ ವಿತರಣಾ ಸಿದ್ಧಾಂತವನ್ನು ಸಂಕ್ಷಿಪ್ತವಾಗಿ  ಹೀಗೆ  ವಿವರಿಸಬಹುದು: 

(1) ಆಹಾರದ ಬೇಡಿಕೆ ಬೇಸಾಯದ ಪರಿಸರವನ್ನು ನಿರ್ಧರಿಸುತ್ತದೆ. (2) ಈ ಪರಿಸರ ಗೇಣಿಯನ್ನು ನಿರ್ಧರಿಸುತ್ತದೆ. (3) ಕೂಲಿಗಾರನನ್ನು ನೇಮಿಸಿಕೊಳ್ಳಲು ಅಗತ್ಯವಿರುವ ಒಟ್ಟು ಹಣ ಕೂಲಿಯನ್ನು ನಿರ್ಧರಿ ಸುತ್ತದೆ. (4) ಇರುವಂಥ ಕೂಲಿಗಾರರ ಉತ್ಪಾದನೆ ಮತ್ತು ಅವರು ಪಡೆಯುವ ಕೂಲಿ ಲಾಭವೆಷ್ಟು ಎಂಬುದನ್ನು ನಿರ್ಧರಿಸುತ್ತದೆ. ಗೇಣಿ ಕುರಿತಾದ ಈತನ ತತ್ತ್ವ ಅರ್ಥಶಾಸ್ತ್ರಕ್ಕೆ ಮುಖ್ಯ ಕೊಡುಗೆಯಾಗಿದೆ. ಆದರೆ ಗೇಣಿ ಕುರಿತಾದ ಆಧುನಿಕ ವಿವರಣೆಯಲ್ಲಿ ಈತನ ಗೇಣಿ ಮೀಮಾಂಸೆಗೆ ಕೆಲವೊಂದು ಮಾರ್ಪಾಟುಗಳನ್ನು ಮಾಡಿದೆ. 
ಗೇಣಿಯ ಸಮಸ್ಯೆ, ಅದರ ಸ್ವರೂಪ, ಉತ್ಪಾದನಾವೆಚ್ಚದಲ್ಲಿ ಅದರ ಪಾತ್ರ, ಮುಖ್ಯವಾಗಿ ಧಾರಣೆಯ ನಿರ್ಣಯದಲ್ಲಿ ಅದರ ಪಾತ್ರ ಇವು ಮುಖ್ಯ ಆರ್ಥಿಕ ಪ್ರಶ್ನೆಗಳೆನಿಸಿದವು. ಪ್ರಪಂಚದಲ್ಲಿ ಕೃಷಿ ಭೂಮಿಗೆ ಮಿತಿಯಿದೆ; ಹಾಗೂ ಎಲ್ಲಾ ಕಡೆಯ ಭೂಮಿ ಒಂದೇ ಗುಣದ್ದಲ್ಲ. ಆದುದರಿಂದ ಜನರು ಮೊದಲು ಉತ್ತಮವರ್ಗದ ಭೂಮಿಯನ್ನೇ ಬೇಸಾಯಕ್ಕೆ ಉಪಯೋಗಿಸುತ್ತಾರೆ. ಅದಾದ ಬಳಿಕ ಮಧ್ಯಮ ವರ್ಗದ ಅನಂತರ ಕೆಳದರ್ಜೆಯ ಭೂಮಿಯಲ್ಲಿ ಬೇಸಾಯಕ್ಕೆ ತೊಡಗುತ್ತಾರೆ. ಜನಸಂಖ್ಯೆ ಹೆಚ್ಚಾದಂತೆ ಕೆಳದರ್ಜೆ ಭೂಮಿಯನ್ನೂ ಬೇಸಾಯಕ್ಕೊಳಪಡಿ ಸಬೇಕು ಅಥವಾ ಉತ್ತಮ ದರ್ಜೆ ಭೂಮಿಗೆ ಹೆಚ್ಚು ಗೇಣಿ ಕೊಡಬೇಕು. ಬೇಸಾಯಗಾರರು ಇಂಥ ಪರಿಸ್ಥಿತಿಯಲ್ಲಿ ತಾವು ಹೆಚ್ಚು ಗೇಣಿ ಕೊಡುತ್ತೇವೆ ಎಂದು ಮುಂದಾಗುತ್ತಾರೆ. ಉತ್ಕøಷ್ಟ ಬಗೆಯ ಭೂಮಿಗೆ ಈ ಬಗೆಯ ಗೇಣಿ ಹುಟ್ಟುತ್ತದೆ ಎಂಬುದು ಈತನ ವಾದ.

ಜೇಮ್ಸ್ ಮಿಲ್, ಜೆರೆಮಿ ಬೆಂತಾಮ್, ಥಾಮಸ್ ಮಾಲ್ತಸ್ ಮೊದಲಾದವರು ಈತನ ಗೆಳೆಯರ ಬಳಗದಲ್ಲಿದ್ದರು. ರಿಕಾರ್ಡೊ ಸಂಸತ್ತಿನ ಸದಸ್ಯನಾಗಿಯೂ (1819-23) ಸೇವೆ ಸಲ್ಲಿಸಿದ್ದ. ಅನಾರೋಗ್ಯ ನಿಮಿತ್ತ 1823ರಲ್ಲಿ ಸಂಸತ್ತಿನಿಂದ ನಿವೃತ್ತಿಪಡೆದ. ಅದೇ ವರ್ಷ ಸೆಪ್ಟಂಬರ್ 11ರಂದು ನಿಧನನಾದ.	
(ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ